ರಾಷ್ಟ್ರಧ್ವಜ
ರಾಷ್ಟ್ರೀಯ ಏಕತೆ. ಸ್ವಾತಂತ್ರ, ದೇಶಪ್ರೇಮ, ಒಗ್ಗಟ್ಟು ಹಾಗೂ ನಿಷ್ಠೆಯ ಪ್ರತೀಕವಾದ ಯಾವುದೇ ಒಂದು ರಾಷ್ಟ್ರದ ಲಾಂಛನ (ನ್ಯಾಷನಲ್ ಫ್ಲ್ಯಾಗ್). ಈ ಲಾಂಛನದ ದರ್ಶನದಿಂದ ಪ್ರಜೆಗಳಲ್ಲಿ ದೇಶಾಭಿಮಾನ, ಧೈರ್ಯ, ಅರ್ಪಣಾಭಾವ ಉದ್ದೀಪನವಾಗುತ್ತವೆ. ರಾಷ್ಟಧ್ವಜದಲ್ಲಿರುವ ಬಣ್ಣಗಳು ಮತ್ತು ವಿವಿಧ ವಿನ್ಯಾಸಗಳು ಆಯಾ ದೇಶದ ಸಮೃದ್ಧಿ, ಆದರ್ಶ ಹಾಗೂ ಅಭಿಲಾಷೆಗಳನ್ನು ಸಂಕೇತಿಸುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಸ್ವತಂತ್ರ ರಾಷ್ಟ್ರವೂ ಒಂದು ರಾಷ್ಟ್ರಧ್ವಜವನ್ನು ಹೊಂದಿರುತ್ತದೆ. ಸಪ್ತವರ್ಣಗಳಲ್ಲಿಯೇ ಅನೇಕ ಸಂಯೋಜನೆಗಳನ್ನು ರಾಷ್ಟ್ರಧ್ವಜ ಹೊಂದಿರುವುದುಂಟು. ಪ್ರತಿಯೊಂದು ರಾಷ್ಟ್ರಧ್ವಜ ಹಿನ್ನೆಲೆಯಲ್ಲಿ ಆಯಾ ರಾಷ್ಟ್ರದ ಚರಿತ್ರೆಯೇ ಅಡಗಿರುತ್ತದೆ. ಪ್ರಾಚೀನದಲ್ಲಿ ರಾಜರು ಬಣ್ಣಗಳನ್ನು ಮತ್ತು ಕೆಲವು ವಸ್ತು ಚಿಹ್ನೆಗಳನ್ನು ಲಾಂಛನಗಳಾಗಿ ಬಳಸುತ್ತಿದ್ದರು. ಧ್ವಜದ ಬಣ್ಣಗಳ ಆಯ್ಕೆಯಲ್ಲಿ ಹಲವಾರು ಸ್ವಾರಸ್ಯಕರ ಸಂದರ್ಭಗಳೂ ಇರುವುದುಂಟು. ವಾಲ್ಟಿಮರ್ ಎಂಬ ಡೆನ್ಮಾರ್ಕಿನ ದೊರೆ ಯುದ್ಧದಲ್ಲಿ ಗೆದ್ದು ಆಕಾಶದ ಕಡೆ ನೋಡಿದಾಗ ಕೆಂಪು ಆಕಾಶದಲ್ಲಿ ಬಿಳಿಮೋಡದ ಕ್ರಾಸ್ ಆಕಾರವನ್ನು ಕಂಡ. ಅನಂತರದಲ್ಲಿ ಕೆಂಪು ಬಟ್ಟೆಯ ಮೇಲೆ ಬಿಳಿಯ ಕ್ರಾಸ್‍ಉಳ್ಳ ಧ್ವಜವನ್ನು 1219ರಿಂದ ಬಳಕೆಗೆ ತಂದ.

ರಾಷ್ಟ್ರಧ್ವಜದ ವಿನ್ಯಾಸವನ್ನು ರೂಪಿಸುವ ಹೆಚ್ಚಿನ ರಾಷ್ಟ್ರಗಳು ಹೆರಾಲ್ಡ್ ಡ್ರೈ ಕ್ರಮವನ್ನು ಅನುಸರಿಸುತ್ತದೆ. ಈ ಕ್ರಮದ ಪ್ರಕಾರ ಒಂದು ಬಣ್ಣದಿಂದ ಮತ್ತೊಂದು ಬಣ್ಣವನ್ನು ಬೇರ್ಪಡಿಸಲು ಬಿಳಿ ಅಥವಾ ಹಳದಿ ಬಣ್ಣವನ್ನು ಬಳಸಬೇಕು. ಈ ಕ್ರಮ ಮಧ್ಯಕಾಲದಲ್ಲಿ ಪ್ರಾಚುರ್ಯಕ್ಕೆ ಬಂತು. ಭಾರತದ ಧ್ವಜದಲ್ಲೂ ಇದೇ ಕ್ರಮವನ್ನು ಕಾಣುತ್ತೇವೆ. ಹಸುರು ಮತ್ತು ಕೇಸರಿಯನ್ನು ಬೇರ್ಪಡಿಸಲು ಬಿಳಿ ಬಣ್ಣವನ್ನು ಬಳಸಲಾಗಿದೆ. ಭಾರತ ಧ್ವಜಕ್ಕೆ ಬಳಸುವ ಬಟ್ಟೆಯನ್ನು ಖಾದಿ ಗ್ರಾಮದ್ಯೋಗ ಸಂಸ್ಥೆ ತಯಾರಿಸುತ್ತದೆ. ಇದರ ಒಂದು ಘಟಕ ಕರ್ನಾಟಕದ ಹುಬ್ಬಳ್ಳಿ ತಾಲ್ಲೂಕಿನ ಬೆಂಗೇರಿಯಲ್ಲೂ ಇದೆ. 

ರಾಷ್ಟ್ರಧ್ವಜವನ್ನು ಹಾರಿಸುವಾಗ ಮತ್ತು ಅದನ್ನು ಬಳಸುವಾಗ ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ರೀತಿ ನೀತಿ ನಿಯಮಗಳನ್ನು ಅನುಸರಿಸುತ್ತದೆ. ಸಾಮಾನ್ಯವಾಗಿ ಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಾರಿಸುವುದು ಕ್ರಮ. ವಿಶೇಷ ಸಂದರ್ಭಗಳಲ್ಲಿ ರಾತ್ರಿ ವೇಳೆಯೂ ಹಾರಿಸುವುದುಂಟು. ರಾಷ್ಟ್ರಧ್ವಜ ಹಾರಿಸುವಾಗ ಅಥವಾ ಇಳಿಸುವಾಗ ಪಾಲ್ಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಧ್ವಜದ ಕಡೆ ಮುಖಮಾಡಿನಿಂತು ಧ್ವಜವಂದನೆ ಸಲ್ಲಿಸಬೇಕು. ರಾಷ್ಟ್ರಧ್ವಜ ಹಾರಿಸಿದ ಅನಂತರ ರಾಷ್ಟ್ರಗೀತೆ ಹಾಡುವುದು ಪದ್ಧತಿ. ಭಾರತ 1947ರ ಆಗಸ್ಟ್ 14ರಂದು ರಾತ್ರಿ ಸ್ವಾತಂತ್ರ್ಯವನ್ನು ಪಡೆದ ಪ್ರಯುಕ್ತ ಅಂದು ಮಧ್ಯರಾತ್ರಿ ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಸ್ತಂಭದ ಸಮೀಪದ ಧ್ವಜದ ಭಾಗವನ್ನು ಹಾಯಿಸ್ಟ್ ಎಂದೂ ಧ್ವಜಸ್ತಂಭದ ದೂರದ ಭಾಗವನ್ನು ಫ್ಲೈ ಎಂದೂ ಕರೆಯುವುದಿದೆ. ಸಾಮಾನ್ಯವಾಗಿ ಧ್ವಜದ ಉದ್ದ ಅಗಲಕ್ಕಿಂತ ಹೆಚ್ಚಾಗಿರುವುದು. ಧ್ವಜದ ಆರೋಹಣ ಕ್ಷಿಪ್ರವಾಗಿಯೂ ಅವರೋಹಣ ನಿಧಾನವಾಗಿಯೂ ಜರುಗುವ ಕ್ರಿಯೆ. ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಷ್ಟ್ರಗಳ ಧ್ವಜಗಳನ್ನು ಪಕ್ಕಪಕ್ಕದಲ್ಲಿ ಹಾರಿಸುವ ಸಂದರ್ಭದಲ್ಲಿ ಎಲ್ಲ ಧ್ವಜಗಳೂ ಒಂದೇ ಎತ್ತರಕ್ಕೆ ಇರುವಂತೆ ಹಾರಿಸುವುದು ನಿಯಮ. 

ಭಾರತದಲ್ಲಿ ರಾಷ್ಟ್ರಧ್ವಜವನ್ನು ಮುಖ್ಯವಾಗಿ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವಗಳಂದು ಹಾರಿಸುವರು. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡದಲ್ಲಿ ರಾಷ್ಟ್ರಧ್ವಜವನ್ನು ಸಾರ್ವತ್ರಿಕ ರಜಾ ದಿನಗಳಲ್ಲಿ ಹಾಗೂ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಹಾರಿಸುವರು. ಧ್ವಜವನ್ನು ಬಳಸುವಾಗ ಅನೇಕ ನಿಯಮಗಳನ್ನು ಪಾಲಿಸಬೇಕೆಂಬ ಕಡ್ಡಾಯವಿದೆ.
(ನೋಡಿ- ಧ್ವಜ)
(ನೋಡಿ- ಭಾರತದ-ರಾಷ್ಟ್ರಧ್ವಜ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ